ತರೈನ್ ಕದನಗಳು-
ಮೊದಲನೆಯ ಎರಡು ಕದನಗಳು ಘೋರಿ ಮಹಮ್ಮದ್ ಮತ್ತು ಚೌಹಾಣ ಮನೆತನದ ದೊರೆ ಪೃಥ್ವೀರಾಜ ಇವರ ನಡುವೆಯೂ ಮೂರನೆಯ ಕದನ ದೆಹಲಿಯಲ್ಲಿ ಸುಲ್ತಾನ ಇಲ್ತಮಶ್ ಮತ್ತು ಘಜ್ನಿಯ ತಾಜುದ್ದೀನ್ ಇಲ್ದಿಜ್ ಇವರ ನಡುವೆಯೂ ನಡೆದವು.

ಒಂದನೆಯ ತರೈನ್ ಕದನ ನಡೆದಿದ್ದು 1190-91ರಲ್ಲಿ. ಘೋರಿ ಮುಹಮ್ಮದನ ಸೇನೆ ಪೃಥ್ವೀರಾಜನ ಅಧೀನದಲ್ಲಿದ್ದ ಪ್ರದೇಶಗಳಲ್ಲಿ ದಾಳಿ ಮಾಡತೊಡಗಿದಾಗ ಪೃಥ್ವೀರಾಜ ಎರಡು ಲಕ್ಷ ಕುದುರೆಗಳೂ ಮೂರು ಸಾವಿರ ಆನೆಗಳೂ ಇದ್ದ ದೊಡ್ಡ ಸೈನ್ಯದೊಂದಿಗೆ, ತನ್ನ ಸಾಮಂತ ರಜಪೂತ ದೊರೆಗಳೊಡಗೂಡಿ, ಘೋರಿ ಮುಹಮ್ಮದ ಬೀಡುಬಿಟ್ಟಿದ್ದ ತಬರಿಂಧಾ (ಈಗಿನ ಸರ್‍ಹಿಂದ್) ಕಡೆಗೆ ಹೊರಟ. ಮುಹಮ್ಮದ ಇವನನ್ನು ತರೈನ್ನಲ್ಲಿ ಎದುರಿಸಿದ. ಅಲ್ಲಿ ನಡೆದ ಕದನದಲ್ಲಿ ಮುಹಮ್ಮದನ ಸೈನ್ಯದ ಎಡ-ಬಲ ಪಕ್ಕಗಳು ಬಲಗುಂದಿದುವು. ಆ ಸೈನಿಕರು ಪಲಾಯನ ಮಾಡಿದರು. ಮುಹಮ್ಮದನ ಸೇನೆ ಕರಗಿತು. ಮುಹಮ್ಮದ ಕುದುರೆಯ ಮೇಲೆ ಕುಳಿತು. ತನ್ನ ಕತ್ತಿಯನ್ನು ಹಿರಿದು, ಅಳಿದುಳಿದ ಸೇನೆಯೊಂದಿಗೆ ರಜಪೂತರತ್ತ ಮುನ್ನುಗ್ಗಿದ. ದೆಹಲಿಯ ಗೋವಿಂದರಾಜ ಇವನನ್ನು ಕಂಡು, ತನ್ನ ಆನೆಯನ್ನು ಮುಹಮ್ಮದನ ಕಡೆಗೆ ನುಗ್ಗಿಸಿದ. ಮುಹಮ್ಮದ ಅವನ ಮೇಲೆ ಭರ್ಜಿಯೊಂದನ್ನು ಎಸೆದ. ಗೋವಿಂದರಾಜನ ಮುಂದಿನ ಎರಡು ಹಲ್ಲುಗಳು ಮುರಿದವು. ಗೋವಿಂದರಾಜ ಪ್ರತಿಯಾಗಿ ಎಸೆದ ಭಲ್ಲೆಯಿಂದ ಸುಲ್ತಾನನ ತೋಳಿನಲ್ಲಿ ತೀವ್ರವಾದ ಗಾಯವಾಯಿತು. ಮುಹಮ್ಮದ್ ಬೀಳದಂತೆ ಖಲ್ಜಿ ಸೈನಿಕನೊಬ್ಬ ತಡೆದು ಅವನನ್ನು ರಣರಂಗದಿಂದ ಆಚೆಗೆ ಕರೆದೊಯ್ದ. ಮುಹಮ್ಮದ ಸೋತು ಹಿಂದಿರುಗಬೇಕಾಯಿತು. ಈ ಕದನದಲ್ಲಿ ರಜಪೂತರ ಕಡೆ ಪ್ರಧಾನ ಪಾತ್ರ ವಹಿಸಿದ್ದವನು ಪೃಥ್ವೀರಾಜನ ದಂಡನಾಯಕನಾಗಿದ್ದ ಸ್ಕಂದ.

ಎರಡನೆಯ ತರೈನ್ ಕದನ 1192ರಲ್ಲಿ ನಡೆಯಿತು. ಪೃಥ್ವೀರಾಜನಿಂದ ಪರಾಜಿತನಾದ ಘೋರಿ ಮುಹಮ್ಮದ ಒಂದು ಲಕ್ಷ ಇಪ್ಪತ್ತು ಸಾವಿರ ಸೈನಿಕರ ಭಾರಿ ಸೈನವೊಂದನ್ನು ಘಜ್ನಿಯಲ್ಲಿ ಜಮಾಯಿಸಿ, ಪೆಷಾವರ್ ಮತ್ತು ಮುಲ್ತಾನ್ ಮೂಲಕ ಲಾಹೋರಿಗೆ ಬಂದು ಅಲ್ಲಿಂದಲೂ ನೆರವು ಪಡೆದುಕೊಂಡು, ಪೃಥ್ವೀರಾಜನಿಗೆ ಒಂದು ಓಲೆ ಕಳುಹಿಸಿದ. ಪೃಥ್ವೀರಾಜ ಇಸ್ಲಾಂ ಧರ್ಮವನ್ನು ಸ್ವೀಕರಿಸುವುದಲ್ಲದೆ ಮುಹಮ್ಮದನ ಸಾರ್ವಭೌಮತ್ವವನ್ನೊಪ್ಪಬೇಕೆಂದೂ ಇಲ್ಲದಿದ್ದರೆ ಯುದ್ಧವನ್ನೆದುರಿಸಬೇಕಾದೀತೆಂದೂ ತಿಳಿಸಿದ. ಪೃಥ್ವೀರಾಜ ಇದನ್ನು ತಿರಸ್ಕರಿಸಿ, ಮೂರು ಲಕ್ಷ ಕುದುರೆಗಳಿಂದಲೂ ಮೂರು ಸಾವಿರ ಆನೆಗಳಿಂದಲೂ ಕಾಲಾಳುಗಳಿಂದಲೂ ಕೂಡಿದ ದೊಡ್ಡ ಸೈನ್ಯವನ್ನು ಕೂಡಿಸಿ, ಅನೇಕ ರಾಜರ ಸಹಾಯವನ್ನು ಪಡೆದು, ಹಿಂದಿನ ವಿಜಯದ ನೆನಪಿನಿಂದ ಕೂಡಿದ ಉತ್ಸಾಹದಿಂದ ಮುನ್ನಡೆದ. ಮೊದಲನೆಯ ಕದನದ ಸಮಯದಲ್ಲಿ ದಂಡನಾಯಕನಾಗಿದ್ದ ಸ್ಕಂದ ಬೇರೊಂದೆಡೆಯಲ್ಲಿ ಯುದ್ಧನಿರತನಾಗಿದ್ದುದರಿಂದ ಅವನು ಬರಲಾಗಲಿಲ್ಲ. ಇನ್ನೊಬ್ಬ ದಳಪತಿ ಉದಯರಾಜ ಹೊರಡುವುದು ತಡವಾಯಿತು. ದೆಹಲಿಯ ಗೋವಿಂದರಾಜ ಹಾದಿಯಲ್ಲಿ ಪೃಥ್ವೀರಾಜನನ್ನು ಕೂಡಿಕೊಂಡ. ಪೃಥ್ವೀರಾಜ ಮುಂದುವರಿಯಬಾರದೆಂದು ಸೋಮೇಶ್ವರನೆಂಬ ಮಂತ್ರಿ ಅವನಿಗೆ ಸಲಹೆ ನೀಡಿದ. ಸೋಮೇಶ್ವರನ ಸಲಹೆಯನ್ನು ಪೃಥ್ವೀರಾಜ ಸಂಶಯ ದೃಷ್ಟಿಯಿಂದ ನೋಡಿದ. ಅವನು ದ್ರೋಹ ಬಗೆಯುತ್ತಿದ್ದಾನೆಂದು ಸಂದೇಹಿಸಿ ಅವನ ಕಿವಿಗಳನ್ನು ಕತ್ತರಿಸಿ ಅವನನ್ನು ವಜಾ ಮಾಡಿದ. ಸೋಮೇಶ್ವರ ಪೃಥ್ವೀರಾಜನ ಶತ್ರುವಾಗಿ ಪರಿಣಮಿಸಿ ಮುಸ್ಲಿಮರ ಪಕ್ಷ ಸೇರಿದ. ಪೃಥ್ವೀರಾಜ ತನ್ನ ಭಾರಿ ಸೇನೆಯೊಂದಿಗೆ ತೈರನ್ ರಣರಂಗವನ್ನು ಮುಟ್ಟಿದ. ಮುಹಮ್ಮದ್ ತಬರಿಂಧಾವನ್ನು ವಶಪಡಿಸಿಕೊಂಡು ತರೈನ್‍ಗೆ ಬಂದ. ತಬರಿಂಧಾ ಮತ್ತು ಪಂಜಾಬ್ ವಿಜಯಕ್ಕೇ ತನ್ನ ಆಕ್ರಮಣವನ್ನು ಸೀಮಿತಗೊಳಿಸಿ ಹಿಂದಿರುಗಬೇಕೆಂದು ಮುಹಮ್ಮದನಿಗೆ ಪೃಥ್ವೀರಾಜ ಒಂದು ಪತ್ರ ಕಳಿಸಿದ. ಮುಹಮ್ಮದ್ ಒಂದು ಉಪಾಯ ಹೂಡಿದ, ತನ್ನ ಅಣ್ಣನ ಆಣತಿಯಂತೆ ತಾನು ಬಂದಿರುವುದಾಗಿಯೂ ಪೃಥ್ವೀರಾಜನ ಸೂಚನೆಯನ್ನು ಅವನಿಗೆ ಕಳಿಸಿ, ಅವನಿಂದ ಒಪ್ಪಿಗೆ ಬಂದರೆ ಹಿಂದಿರುಗುವುದಾಗಿಯೂ, ಅದುವರೆಗೂ ಯುದ್ಧ ಮಾಡದಿರಲು ಒಪ್ಪುವುದಾಗಿಯೂ ತಿಳಿಸಿದ. ಪೃಥ್ವೀರಾಜನ ಸೈನ್ಯ ಈ ಮಾತನ್ನು ನಂಬಿತು. ಅಂದು ರಾತ್ರಿ ಅದು ಆನಂದದಿಂದ ಮೈಮರೆತಿದ್ದಾಗ ಮುಹಮ್ಮದ್ ತನ್ನ ಪಾಳೆಯದಲ್ಲಿ ಸೈನಿಕರು ತಂಗಿರುವಂತೆ ಭ್ರಮೆ ಹುಟ್ಟಿಸಲು ದೀಪಗಳನ್ನು ಹಚ್ಚಿಸಿ ಇಡಿಸಿ, ರಹಸ್ಯವಾಗಿ ಬೇರೊಂದು ಮಾರ್ಗದಿಂದ ಪೃಥ್ವೀರಾಜನ ಪಾಳೆಯದ ಹಿಂಬದಿಯಿಂದ ದಾಳಿಮಾಡಿದ. ಚಕಿತರಾದ ರಜಪೂತ ಸೈನಿಕರು ಕಕ್ಕಾಬಿಕ್ಕಿಯಾದರು. ಆದರೆ ಪೃಥ್ವೀರಾಜ ಮುಂದುಗೆಡದೆ ತನ್ನ ಅಶ್ವಸೇನೆಯನ್ನು ಮುನ್ನುಗ್ಗಿಸಿ ಶತ್ರುದಾಳಿಯನ್ನು ಹಿಮ್ಮೆಟ್ಟಿಸಿದ.

ಸೈನ್ಯದೊಂದಿಗೆ ತನ್ನ ಪಾಳೆಯಕ್ಕೆ ಹಿಂದಿರುಗಿದ ಸುಲ್ತಾನ ಇನ್ನೊಂದು ಉಪಾಯ ಹೂಡಿದ. ತನ್ನ ಸೈನ್ಯವನ್ನು ಐದು ತುಕಡಿಗಳಾಗಿ ವಿಂಗಡಿಸಿದ. ನಾಲ್ಕು ತುಕಡಿಗಳಲ್ಲಿ ತಲಾ ಹತ್ತು ಸಾವಿರ ರಾವುತರೂ ಉಳಿದ ಒಂದರಲ್ಲಿ ಹನ್ನೆರಡು ಸಾವಿರ ರಾವುತರೂ ಇದ್ದರು. ಹತ್ತು ಸಾವಿರ ರಾವುತರ ನಾಲ್ಕು ತುಕಡಿಗಳಿಂದ ಅವನು ರಜಪೂತ ಸೇನೆಯ ಮೇಲೆ ನಾಲ್ಕೂ ಕಡೆಗಳಿಂದ ದಾಳಿ ಮಾಡಿಸಿದ. ರಜಪೂತ ಸೇನೆ ಪ್ರತಿದಾಳಿ ನಡೆಸಿದಾಗ ಇವು ಹಿನ್ನಡೆಯುತ್ತ ಮತ್ತೇ ಮತ್ತೇ ದಾಳಿ ಮಾಡುವ ಸೋಗು ಹಾಕುತ್ತ ಪೃಥ್ವೀರಾಜನ ಕಡೆಯ ಸೈನ್ಯಕ್ಕೆ ಆಯಾಸವನ್ನುಂಟುಮಾಡಿದುವು. ಅದುವರೆಗೂ ದಾಳಿಯಲ್ಲಿ ನಿರತವಾಗದಿದ್ದ ದೊಡ್ಡ ತುಕಡಿ ಅನಂತರ ರಜಪೂತರ ಮೇಲೆ ಒಮ್ಮೆಗೇ ಎರಗಿತು. ಪೃಥ್ವೀರಾಜನ ಕಡೆಯಲ್ಲಿ ಒಂದು ಲಕ್ಷ ಸೈನಿಕರು ಮಡಿದರು. ಗೋವಿಂದರಾಜನೂ ಸತ್ತ. ಪೃಥ್ವೀರಾಜ ತನ್ನ ಆನೆಯಿಂದ ಇಳಿದು ಕುದುರೆಯನ್ನು ಹತ್ತಿ ಓಡುತ್ತಿದ್ದಾಗ ಮುಸ್ಲಿಮರು ಅವನ ಬೆನ್ನಟ್ಟಿ ಸೆರೆಹಿಡಿದರು. ಮುಹಮ್ಮದ್ ತನ್ನ ದಾಳಿಯನ್ನು ಮುಂದುವರಿಸಿ ಅನೇಕ ಪ್ರದೇಶಗಳನ್ನು ಜಯಿಸಿ, ಸೆರೆಯಾಗಿದ್ದ ಪೃಥ್ವೀರಾಜನೊಂದಿಗೆ ಅಜ್ಮೀರದ ಕಡೆಗೆ ಸಾಗಿದ. ಪೃಥ್ವೀರಾಜನಿಗೆ ಕ್ಷಮಾದಾನ ಮಾಡಲಾಗಿತ್ತೆಂದೂ ಆದರೆ ಅವನು ಸುಲ್ತಾನನ ವಿರುದ್ಧ ಅನಂತರ ಸಂಚು ಹೂಡಿದನೆಂಬ ಕಾರಣದಿಂದ ಸುಲ್ತಾನ ಅವನನ್ನು ಕೊಲ್ಲಿಸಿದನೆಂದೂ ತಿಳಿದುಬರುತ್ತದೆ. ಈ ಬಗ್ಗೆ ಬೇರೆ ಬಗೆಯ ಕೆಲವು ವರದಿಗಳೂ ಉಂಟು.

ಒಂದನೆಯ ತರೈನ್ ಕದನದಲ್ಲಿ ಹಿಂದೂಗಳು ಮುಹಮ್ಮದನ ಸೈನ್ಯವನ್ನು ಭಾರತದ ಗಡಿಯಾಚೆಯವರೆಗೂ ಅಟ್ಟಿಸಿಕೊಂಡು ಹೋಗಿ ಅವರ ಬಲವನ್ನು ಸಂಪೂರ್ಣವಾಗಿ ಮುರಿದಿದ್ದರೆ ಅವನು ಮತ್ತೆ ಗರಿಗಟ್ಟಿಕೊಂಡು ದಂಡೆತ್ತಿ ಬರುತ್ತಿರಲಿಲ್ಲವೆಂದೂ ಹಿಂದೂಗಳು ಎಂದಿನಂತೆ ಕೇವಲ ರಕ್ಷಣಾತ್ಮಕ ಕದನ ಮಾಡಿದರೇ ಹೊರತು, ಆಕ್ರಮಣಶೀಲ ಕದನ ಹೂಡದಿದ್ದುದೇ ದೊಡ್ಡ ತಪ್ಪಾಯತೆಂದೂ ಹೇಳಲಾಗಿದೆ. ಅಂತೂ ಎರಡನೆಯ ತರೈನ್ ಕದನ ಭಾರತದ ಇತಿಹಾಸದಲ್ಲಿ ಒಂದು ಮಹಾತಿರುವಾಗಿ ಪರಿಣಮಿಸಿತು. 

ಒಂದನೆಯ ಮತ್ತು ಎರಡನೆಯ ತರೈನ್ ಕದನಗಳು ಹಿಂದುಗಳಿಗೂ ಮುಸ್ಲಿಮರಿಗೂ ನಡೆದ ಕದನವಾದರೆ ಮೂರನೆಯ ಕದನ ನಡೆದದ್ದು (1214) ಎರಡು ಮುಸ್ಲಿಂ ಪಕ್ಷಗಳ ನಡುವೆ. ಆ ಸಮಯದಲ್ಲಿ ದೆಹಲಿಯಲ್ಲಿ ಗುಲಾಮೀ ಸಂತತಿಯ ಇಲ್ತುತ್‍ಮಿಷ್ ಸುಲ್ತಾನನಾಗಿದ್ದ. ಘೋರಿ ಮುಹಮ್ಮದನಿಗೆ ಮಕ್ಕಳಿರಲಿಲ್ಲ. ಅವನು ತೀರಿಕೊಂಡಾಗ ಅವನ ಉತ್ತರಾಧಿಕಾರಕ್ಕೆ ಅವನ ಗುಲಾಮರಲ್ಲಿ ಹಲವರ ನಡುವೆ ಸ್ಪರ್ಧೆ ಏರ್ಪಟ್ಟಿತು. ಮುಹಮ್ಮದನ ಸೋದರ ಸಂಬಂಧಿ ಘಿಯಾಸ್ - ಉದ್ದೀನ್ ಮಹ್ಮೂದ ವಂಶಪಾರಂಪರ್ಯವಾಗಿ ಬಂದ ಫಿರೋಜ್‍ಕೋ ಪ್ರದೇಶದ ಮೇಲಿನ ಒಡೆತನವಷ್ಟಕ್ಕೇ ಸಂತೃಪ್ತನಾಗಿದ್ದ. ತನ್ನ ಮನೆತನದ ಗುಲಾಮರನ್ನು ಬಿಡುಗಡೆ ಮಾಡುವುದಷ್ಟೇ ಅವನಿಗಿದ್ದ ಆಕಾಂಕ್ಷೆ. ಅವರ ಪೈಕಿ ಒಬ್ಬನಾದ ತಾಜುದ್ದೀನ್ ಯಿಲ್ದಿeóï ಎಂಬುವನು ಘಜ್ನಿಯನ್ನು ಹಿಡಿದುಕೊಂಡ. ಆದರೆ ಅವನಿಗೆ ಇತರ ಸ್ಪರ್ಧಿಗಳು ವಿರೋಧ ವ್ಯಕ್ತಪಡಿಸಿದರು. ಫಜ್ನಿಯಲ್ಲಿ ಅವನ ಪ್ರಾಬಲ್ಯ ಕುಗ್ಗಿತು. ಆದರೂ ತಾನೊಬ್ಬ ದೊಡ್ಡ ಸುಲ್ತಾನೆಂದೇ ಭಾವಿಸಿದ್ದ ತಾಜದ್ದೀನ್ ಯಿಲ್ದಿಜ್ ಭಾರತದ ಕಡೆಗೆ ನುಗ್ಗಿದ. ಘಜ್ನಿಯಿಂದ ಎಲ್ದಿಜ್ ಕೊನೆಗೂ ಸಂಪೂರ್ಣವಾಗಿ ಕಾಲ್ತೆಗೆಯಬೇಕಾಗಿ ಬಂದಾಗ ಲಾಹೋರಿನಲ್ಲಿ ಪ್ರಬಲನಾಗಲು ಹವಣಿಸಿ, ದೆಹಲಿಯ ಸಹಾಯ ಅಪೇಕ್ಷಿಸಿ ಇಲ್ತುತ್‍ಮಿಷ್‍ನಿಗೆ ಆದೇಶ ಕಳಿಸಿದ. ಎಲ್ದೂಜ್ ನೊಂದಿಗೆ ಇಲ್ತುತ್‍ಮಿಷ್ ತರೈನ್‍ನಲ್ಲಿ ಯುದ್ಧ ಮಾಡಿ ಅವನನ್ನು ಸೆರೆಹಿಡಿದ.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ